ಬಾಬಾಬುಡನ್ ಶ್ರೇಣಿ -  ಕಪ್ಪು ಹಾರ್ನ್‍ಬ್ಲೆಂಡ್‍ಯುಕ್ತ ಶಿಲೆಗಳಿಂದಲೂ ಸ್ತರೀಕೃತ ಹಿಮಟೈಟ್-ಕ್ವಾಟ್ರ್ಸೈಟ್ ಆ್ಯಂಫೀಬೊಲೈಟ್ ಮುಂತಾದ ಶಿಲೆಗಳಿಂದಲೂ ಕೂಡಿ ಬಾಬಾಬುಡನ್ ಗಿರಿಶ್ರೇಣಿಯನ್ನು ರೂಪಿಸಿರುವ ಶಿಲಾ ಸ್ತೋಮ. ಕರ್ನಾಟಕದ ಅತ್ಯುನ್ನತ ಪರ್ವತಶ್ರೇಣಿ. ಚಿಕ್ಕಮಗಳೂರು ಪಟ್ಟಣದ ಉತ್ತರಕ್ಕೆ 130 23—130 35 ಉತ್ತರ ಅಕ್ಷಾಂಶಗಳ ನಡುವೆ 750 57 ಪೂರ್ವ ರೇಖಾಂಶದ ನೇರ ಖಂಡಚಂದ್ರ ಅಥವಾ ಕುದುರೆಲಾಳದ ಆಕೃತಿಯಲ್ಲಿ ವ್ಯಾಪಿಸಿದೆ.

ಶ್ರೇಣಿಯ ಸರಾಸರಿ ಎತ್ತರ ಸಮುದ್ರ ಮಟ್ಟದಿಂದ 1830 ಮೀ. ಒಟ್ಟು ವ್ಯಾಪ್ತಿ ಸುಮಾರು 1280 ಚಕಿಮೀ. ಹೆಬ್ಬೆ ಬೆಟ್ಟದಲ್ಲಿ (1337 ಮೀ) ಶ್ರೇಣಿಯ ಉತ್ತರ ಚಾಚು ಆರಂಭ; ಅಲ್ಲಿಂದ ಸುಮಾರು 24 ಕಿಮೀ ದೂರ ಪೂರ್ವಾಭಿಮುಖವಾಗಿ ಹಬ್ಬಿ ಅಲ್ಲಿ ದಕ್ಷಿಣಕ್ಕೆ ಬಾಗಿ ಮತ್ತೆ ಪೂರ್ವಾಭಿಮುಖವಾಗಿ ಸುಮಾರು 3 ಕಿಮೀ ದೂರ ಹರಿದಿದೆ. ಶ್ರೇಣಿಯ ದಕ್ಷಿಣ ಚಾಚಿನಲ್ಲಿ ಬಸವನ ಗುಡ್ಡ ಮತ್ತು ವೊಡ್ಡಿನ ಗುಡ್ಡ ಎಂಬ ಎರಡು ಬೆಟ್ಟಗಳಿವೆ.

ಮುಳ್ಳಯ್ಯನ ಗಿರಿ ಇಲ್ಲಿಯ ಅತ್ಯನ್ನತ ಶಿಖರ (1925 ಮೀ). ಶ್ರೇಣಿಯ ದಕ್ಷಿಣದಲ್ಲಿದೆ. ಉತ್ತರದ ಹಿಮಾಲಯ ಶ್ರೇಣಿಗೂ ದಕ್ಷಿಣದ ನೀಲಗಿರಿ ಶ್ರೇಣಿಗೂ ನಡುವೆ ಇರುವ ಅತ್ಯುನ್ನತ ಶಿಖರವಿದು. ಇದರ ಈಶಾನ್ಯಕ್ಕೆ ಬಾಬಾಬುಡನ್ ಗಿರಿ (1894 ಮೀ) ಇದೆ. ವೇದ ಮತ್ತು ಆವತಿ ನದಿಗಳ ಉಗಮಸ್ಥಾನ ಇಲ್ಲಿಯೇ. ಬಾಬಾಬುಡನ್ ಗಿರಿಯ ಪೂರ್ವಭಾಗದಲ್ಲಿ ದೇವೀರಮ್ಮನ ಗುಡ್ಡವಿದೆ. ಶ್ರೇಣಿಯ ಈಶಾನ್ಯ ಮೂಲೆಯಲ್ಲಿ ಕಲ್ಲತ್ತಗಿರಿ (1876ಮೀ) ಇದೆ. ಇದರ ಉತ್ತರದಲ್ಲಿ ಕೆಮ್ಮಣ್ಣು ಗುಂಡಿಯ ಬಳಿ ಪ್ರವಾಸಿಗೃಹಗಳನ್ನು ಕಟ್ಟಲಾಗಿದೆ. ಬಾಬಾಬುಡನ್ ಗಿರಿಯ ದಕ್ಷಿಣ ಭಾಗ ಕಾಫಿ ಬೆಳೆಯಲು ಯೋಗ್ಯ ಸ್ಥಳ. ಬೆಟ್ಟಗಳ ತಪ್ಪಲುಗಳಲ್ಲಿಯೂ ಜಾಗರ್ ಕಣಿವೆಯಲ್ಲಿಯೂ ಕಾಫಿ ತೋಟಗಳು (ಸ್ಥಾಪನೆ ಪ್ರಾಯಶಃ 1840) ಹರಡಿವೆ. ಬಾಬಾಬುಡನ್‍ಗಿರಿಯ ಈಶಾನ್ಯದಲ್ಲಿ ಭದ್ರಾ ನದಿಯನ್ನು ಕೂಡುವ ಹೊಳೆ 183 ಮೀ ಎತ್ತರದಿಂದ ದುಮುಕುತ್ತದೆ.

ಬಾಲಚಂದ್ರಾಕೃತಿಯಲ್ಲಿರುವ ಬಾಬಾಬುಡನ್ ಗಿರಿ ಶ್ರೇಣಿಗೆ ಪುರಾಣಗಳಲ್ಲಿ ಚಂದ್ರದ್ರೋಣ ಎಂದೇ ಹೆಸರು. ವಾಯುಪರ್ವತವೆಂಬ ಹೆಸರೂ ಇದ್ದುದು ಕೆಲವು ಶಾಸನಗಳಿಂದ ತಿಳಿದುಬರುತ್ತದೆ. ಆದರೆ ಮಹಮದೀಯ ಸಂತ ಬಾಬಾಬುಡನ್ ಅಲ್ಲಿ ನೆಲಸಿದ ಕಾರಣ ಅದಕ್ಕೆ ಮುಂದೆ ಬಾಬಾಬುಡನ್ ಗಿರಿ ಎಂಬ ಹೆಸರಾಯಿತು. ಗಿರಿಯ ಬಳಿಯ ದತ್ತಾತ್ರೇಯನ ಫಲಾಹಾರಮಠಕ್ಕೆ ಚನ್ನವೀರಮಠವೆಂಬ ಹೆಸರೂ ಇದೆ. ಚನ್ನವೀರ ಪ್ರಾಚೀನ ಕಾಲದಲ್ಲಿದ್ದವ, ಫಲಾಹಾರದೇವನ ಶಿಷ್ಯ. ಆ ಮಠದಲ್ಲಿ ಹನುಮಂತ ಸ್ಥಾಪಿಸಿದ ವಿರೂಪಾಕ್ಷ ಲಿಂಗವಿದೆ. ಚಿಕ್ಕಮಗಳೂರು 109ನೆಯ ಶಾಸನದಲ್ಲಿ (ಕ್ರಿ.ಶ.1717) ಮಠದ ಸ್ವಾಮಿಗಳಿಗೆ ನೀಡಿದ ಬಿರುದುಬಾವಲಿಗಳ ವಿವರಗಳಿವೆ. ಬಾಬಾಬುಡನ್ ಗಿರಿಯ ಮೇಲಿನ ಗುಹೆಯಲ್ಲಿರುವ ಪೀಠವನ್ನು ಹಿಂದುಗಳು ದತ್ತಾತ್ರೇಯ ಪೀಠವೆಂದು ಹೇಳಿದರೆ ಮುಸಲ್ಮಾನರು ಅದು ತಮ್ಮ ಗುರು ಹಜರತ್‍ದಾದ ಹಯಾತ್‍ಮೀರ್ ಕಲಂದರನ ಗದ್ದುಗೆ ಇನ್ನುತ್ತಾರೆ. ಇವರು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಪ್ರತಿ ವರ್ಷ ಮಾರ್ಚಿ ತಿಂಗಳಲ್ಲಿ ಇಲ್ಲಿ ಬಾಬಾಬುಡನ್ ಸಂತನ ಉರಸ್ (ಜಾತ್ರೆ) ನಡೆಯುತ್ತದೆ. ಹೀಗೆ ದತ್ತಾತ್ರೇಯ ಪೀಠ ಹಿಂದೂ ಮುಸಲ್ಮಾನರ ಯಾತ್ರಾಸ್ಥಳ. ಗುಹೆಯ ಪೀಠದ ಮೇಲ್ವಿಚಾರಣೆ ಸಮೀಪದ ಅತ್ತಿಗುಂಡಿಗ್ರಾಮದಲ್ಲಿ ವಾಸಿಸುವ ಮುಸಲ್ಮಾನ್ ಕಲಂದರನದು. ಮುಸಲ್ಮಾನರು ಈ ಗುಹಾಂತರ ಪೀಠವಿರುವ ಸ್ಥಳವನ್ನು ದಕ್ಷಿಣದ ಮಕ್ಕಾ ಎನ್ನುತ್ತಾರೆ. ಪ್ರಾಚೀನಕಾಲದಲ್ಲಿ ಇದೇ ಗುಹೆಯಲ್ಲಿ ಅಂತರ್ಧಾನನಾದ ದತ್ತಾತ್ರೇಯನ ಪುರಾಗಮನವನ್ನು ಹಿಂದುಗಳು ಇಲ್ಲಿ ನಿರೀಕ್ಷಿಸುತ್ತ ಆತ ಬಂದಾಗ ಧರ್ಮಯುಗ ಸ್ಥಾಪಿತವಾಗುವುದೆಂಬ ನಂಬಿಕೆ ಹೊಂದಿದ್ದಾರೆ.

ದತ್ತಾತ್ರೇಯ ಪೀಠವಿರುವ ಗುಹೆ ದಕ್ಷಿಣಾಭಿಮುಖವಾಗಿದೆ. ಅದರಲ್ಲಿಯ ಸುರಂಗ ಮಾರ್ಗ ಮಕ್ಕಾಪಟ್ಟಣಕ್ಕೆ ಹೋಗುವುದೆಂದು ನಂಬಿಕೆ. ಗುಹೆಯ ಬಾಗಿಲಿನ ಬಲಗಡೆ ದತ್ತಾತ್ರೇಯ ಪೀಠ ಉಂಟು. ಇದರ ಬಲಭಾಗದಲ್ಲಿ ಸಂತ ಹಜರತ್ ಮೀರ್ ಕಲಂದರ್ ಬಳಸುತ್ತಿದ್ದನೆಂದು ಹೇಳಲಾದ ದೊಣೆ ಇದೆ. ಮಳೆಗಾಲದಲ್ಲಿ ದೊಣೆ ತುಂಬಿ ಅದರಿಂದ ಗವಿಯಲ್ಲಿ ಭೂಗತವಾಗಿರುವ ನಾಲೆಯ ಮೂಲಕ ನೀರು ಹರಿದುಬರುತ್ತದೆ. ಮಕ್ಕಾ ಸುರಂಗದ ಎಡಗಡೆಯ ಮಾಡದಲ್ಲಿ ಹಜರತ್ ಮೀರ್ ಕಲಂದರನ ಬೆಳ್ಳಿಯ ಪಾದುಕೆ ಇರಿಸಿದ್ದಾರೆ. ಗುಹೆಯ ಮುಂಭಾಗದಲ್ಲಿ ಮಹಮದೀಯ ಸಂತನೊಬ್ಬ ನೆಲಸಿದ್ದನೆಂಬ (ಕ್ರಿ.ಶ.1005) ಬಗೆಗೆ ಪಾರಸಿ ಶಾಸನ ಮತ್ತು ಚೂರು ಚೂರಾಗಿರುವ ಚಪ್ಪಡಿ ಇವೆ. ಮೈಸೂರು ಅರಸ ಮುಮ್ಮಡಿ ಕೃಷ್ಣರಾಜ ಒಡೆಯರು ಇಲ್ಲಿಗೆ ಬಂದಾಗ ಸಹಸ್ರಾರು ತೆಂಗಿನ ಕಾಯಿಗಳನ್ನು ಚಪ್ಪಡಿಯ ಮೇಲೆ ಒಡೆದ ಕಾರಣ ಅದು ಚೂರುಚೂರಾಯಿತೆಂದು ಹೇಳುತ್ತಾರೆ. ಬಾಬಾಬುಡನ್ ಗಿರಿಯ ಮೇಲೆ ಗದಾತೀರ್ಥ, ಕಾಮನತೀರ್ಥ ಹಾಗೂ ನೆಲ್ಲಿ ಕಾಯಿತೀರ್ಥ ಎಂಬ ಮೂರು ತೀರ್ಥಗÀಳಿವೆ. ಚಿಕ್ಕಮಗಳೂರಿನಿಂದ ತರೀಕೆರೆಗೆ ಬಾಬಾಬುಡನ್ ಗಿರಿಯ ಪೂರ್ವ ಭಾಗದಿಂದ ಎರಡು ರಸ್ತೆಗಳಿವೆ. ಅವುಗಳಲ್ಲಿ ಒಂದು ನೇರವಾಗಿ ಗಿರಿಯ ಮೇಲೆ ಹಾದು ಲಿಂಗದಹಳ್ಳಿಯ ಮೂಲಕ ಹೋಗುತ್ತದೆ. ಮತ್ತೊಂದು ಮಾರ್ಗ ಲಂಬಾಣಿಗರು ಹೆಚ್ಚಾಗಿ ನೆಲಸಿರುವ ಶಾಂತವೇರಿ ಗ್ರಾಮದ ಮೂಲಕ ಹೋಗುತ್ತದೆ.

ಬಾಬಾಬುಡನ್ ಅದುರು: ಬಾಬಾಬುಡನ್ ಪ್ರದೇಶದ ಉತ್ತರ ಭಾಗದಲ್ಲಿರುವ ಕೆಮ್ಮಣ್ಣುಗುಂಡಿ ಗಣಿಗಳಿಂದ ತೆಗೆಯುತ್ತಿರುವ ಕಬ್ಬಿಣದ ಅದುರಿಗೆ ಈ ಹೆಸರಿದೆ. ನಿಕ್ಷೇಪಗಳು ಸಿಗುವ ಮುಖ್ಯ ಸ್ಥಳಗಳು 
ಸ್ಥಳ

ಕೆಮ್ಮಣ್ಣು ಗುಂಡಿ
ಕಲ್ಲತ್ತಗಿರಿ
ಅತ್ತಿಗುಂಡಿ
ಪೀಠಕೈಕಂಬ
ಜೇನುಸುರಿಗುಡ್ಡ
ಹೊನ್ನಮ್ಮನ ಹಳ್ಳ
ಮುಳ್ಳಯ್ಯನ ಗಿರಿ

	ಈ ಪರ್ವತ ಪ್ರದೇಶದಲ್ಲಿ ಹರಡಿರುವ ಎಲ್ಲ ದರ್ಜೆಯ ಕಬ್ಬಿಣದ ಅದುರಿನ ಒಟ್ಟು ಪ್ರಮಾಣ ಸುಮಾರು 3000 ಮಿಲಿಯನ್ ಟನ್ ಇರಬಹುದೆಂದು ಅಂದಾಜು. ಇದರಿಂದ 66% ಇರುವ ಕಬ್ಬಿಣದ ಸಾರ ಪಡೆಯುವುದು ಸಾಧ್ಯ ಎಂದು ದೃಢಪಟ್ಟಿದೆ.

ಇಲ್ಲಿಯ ಕಬ್ಬಿಣ ಸಂಯೋಜಿತ ಖನಿಜಗಳಲ್ಲಿ ಹಿಮಟೈಟ್ ಮತ್ತು ಲೈಮೊನೈಟ್ ಮುಖ್ಯವಾದುವು. ಇವುಗಳೊಡನೆ ಒಂದೆರಡು ಕಡೆ ಮ್ಯಾಗ್ನಟೈಟ್ ಸಿಗುವುದೂ ಉಂಟು. ಕಬ್ಬಿಣದ ಅದುರು ಕಬ್ಬಿಣ ಬೆಣಚು ಪದರ ಶಿಲೆಗಳ ಮೇಲ್ಭಾಗದಲ್ಲಿಯೂ ಹಬ್ಬಿರುತ್ತದೆ. ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ಏಣು ನಿಕ್ಷೇಪ (ರಿಜ್‍ಡಿಪಾಸಿಟ್) ಮತ್ತು ಒಳವೋರೆ ನಿಕ್ಷೇಪ (ಸ್ಕಾರ್ಪ್ ಡಿಪಾಸಿಟ್) ಎಂಬ ಎರಡು ನಿಕ್ಷೇಪಗಳಿವೆ. ಏಣು ನಿಕ್ಷೇಪ ಕೆಮ್ಮಣ್ಣುಗುಂಡಿಯ ಸಮೀಪದಲ್ಲಿದೆ. ಒಳವೋರೆ ನಿಕ್ಷೇಪ ದೂಪದಗಿರಿಯ ಹತ್ತಿರದಲ್ಲಿದೆ. ಈ ಎರಡು ನಿಕ್ಷೇಪಗಳಿಂದ ಗಣಿಯಿಟ್ಟು ಅದುರನ್ನು ಹೊರತೆಗೆದು ಉಕ್ಕಿನ ಹಗ್ಗದಿಂದ ಗಗನಮಾರ್ಗವಾಗಿ ಬೆಟ್ಟದ ಬುಡಕ್ಕೆ ತಂದು ಅಲ್ಲಿಂದ ಟ್ರಾಮ್‍ವೇ ಮುಖಾಂತರ ಭದ್ರಾವತಿ ಕಾರ್ಖಾನೆಗೆ ರವಾನಿಸಲಾಗುತ್ತದೆ. ಈ ಪ್ರದೇಶÀದಲ್ಲಿ ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ಟನ್ನುಗಳಷ್ಟು ಅದುರನ್ನು ಹೊರತೆಗೆಯಲಾಗುತ್ತದೆ. ಕೆಮ್ಮಣ್ಣುಗುಂಡಿಯ ಅದುರಿನಿಂದ ಭದ್ರಾವತಿಯ ಕಾರ್ಖಾನೆಯ ಕುಲುಮೆಗಳಲ್ಲಿ ವರ್ಷಕ್ಕೆ ಸುಮಾರು ಎಪ್ಪತ್ತರಿಂದ ಎಂಬತ್ತು ಸಾವಿರ ಟನ್ನುಗಳಷ್ಟು ಬೀಡುಕಬ್ಬಿಣ ತಯಾರಿಸಲಾಗುತ್ತಿದೆ. (ಬಿ.ಜಿ.ಕೆ.; ಕೆ.ಜಿ.ಎಸ್.; ವೈ.ಎಲ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ